ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಧರ್ಮಸ್ಥಳ ಮೇಳ: ಇನ್ನು ಕಾಲಮಿತಿ ಪ್ರದರ್ಶನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಆಗಸ್ಟ್ 21 , 2015
ಎರಡು ಶತಮಾನಗಳಿಗೂ ಅಧಿಕ ಇತಿಹಾಸವಿರುವ ತೆಂಕುತಿಟ್ಟಿನ ಪ್ರತಿಷ್ಠಿತ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಮುಂದಿನ ತಿರುಗಾಟದಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿದೆ.

ಮೂರು ವರ್ಷಗಳ ಕಾಲ ಚಿಂತನ-ಮಂಥನ, ಸರ್ವರ ಅಭಿಪ್ರಾಯ ಸಂಗ್ರಹ ಮತ್ತು ಈಗಾಗಲೇ ಕೆಲವು ಮೇಳಗಳ ಯಶಸ್ವಿ ಪ್ರಯೋಗವನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳ ಮೇಳವನ್ನು ಕಾಲಮಿತಿ ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

ರಾತ್ರಿ 7ರಿಂದ 12:

ಮುಂದಿನ ತಿರುಗಾಟದಿಂದ ಯಕ್ಷಗಾನ ಪ್ರದರ್ಶನ ರಾತ್ರಿ 7ರಿಂದ 12ರವರೆಗೆ ನಡೆಯಲಿದೆ. ಆದರೆ, ಪೂರ್ವ ರಂಗ ಸೇರಿದಂತೆ ಯಕ್ಷ ಪರಂಪರೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

ಚಿಂತನ-ಮಂಥನ:

ಧರ್ಮಸ್ಥಳ ಮೇಳವನ್ನು ಕಾಲಮಿತಿಗೊಳಪಡಿಸುವ ಬಗ್ಗೆ ಮೂರು ವರ್ಷದ ಹಿಂದೆ ಧರ್ಮಸ್ಥಳದಲ್ಲಿ ಚಿಂತನ ಕೂಟ ನಡೆದಿತ್ತು. ಆಗ ಹಲವು ಸಾಧಕ-ಬಾಧಕಗಳನ್ನು ಚರ್ಚಿಸಲಾಗಿತ್ತು. ತಿಂಗಳ ಹಿಂದೆ ಮಂಗಳೂರಿನಲ್ಲಿ ಇಂತಹುದೇ ಚಿಂತನೆ ಸಭೆಯೊಂದು ನಡೆದಿತ್ತು. ಅದರ ನಡುವೆ ದೇವ ಪ್ರಶ್ನೆ ಮೂಲಕ ಅನುಮತಿ ಪಡೆಯಲಾಗಿದೆ, ಯಕ್ಷಗಾನ ಬಯಲಾಟ ಸೇವಾಕರ್ತರಲ್ಲಿ ಒಪ್ಪಿಗೆ ಪಡೆಯಲಾಗಿದೆ. ಬಹುತೇಕ ಮಂದಿ ಒಪ್ಪಿದ್ದಾರೆ. ಸಹಜವಾಗಿಯೇ ಉತ್ತರಿಸಲಾಗದ ಕೆಲವು ಪ್ರಶ್ನೆಗಳಿಗೆ ಕಾಲ ಮತ್ತು ಪ್ರಯೋಗಶೀಲತೆಯು ಉತ್ತರ ಕೊಡಬೇಕಾಗಿದೆ ಎಂದು ಡಾ. ಹೆಗ್ಗಡೆ ಹೇಳಿದ್ದಾರೆ.

203 ವರ್ಷಗಳ ಇತಿಹಾಸ:

ಧರ್ಮಸ್ಥಳ ಮೇಳ ಸ್ಥಾಪನೆಯಾಗಿದ್ದು ಯಾವಾಗ ಎನ್ನುವುದು ಸ್ಪಷ್ಟವಿಲ್ಲವಾದರೂ 1812ರಲ್ಲಿ ಮೈಸೂರು ಮಹಾರಾಜರು ಅಧಿಕೃತ ಪ್ರದರ್ಶನಕ್ಕೆ ಆಹ್ವಾನ ನೀಡಿರುವುದನ್ನೇ ಅಧಿಕೃತವಾಗಿ ನೋಡಿದರೂ 203 ವರ್ಷಗಳ ಇತಿಹಾಸವಿದೆ. ರತ್ನವರ್ಮ ಹೆಗ್ಗಡೆಯವರ ಕಾಲದಲ್ಲಿ ಆರು ಮುಖಗಳ ವಿಶಿಷ್ಟ ರಂಗಸ್ಥಳ ಪ್ರಯೋಗದೊಂದಿಗೆ ಮಿಂಚಿದ ಮೇಳ ಮುಂದೆ ಡಾ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಡಿ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆಯುತ್ತಿದೆ. ಆರು ಜಿಲ್ಲೆಗಳಲ್ಲಿ ಪ್ರದರ್ಶನ: ಧರ್ಮಸ್ಥಳ ಮೇಳ ದ.ಕ., ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಉ.ಕ. ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರದರ್ಶನ ನೀಡುತ್ತಿದೆ.

ಯಾಕೆ ಕಾಲಮಿತಿ?:

ತುಳು ನಾಡಿನ ಭಾಷೆ, ಸಂಸ್ಕೃತಿಯನ್ನು ಬೆಳೆಸಿ ಜನಜೀವನದ, ಸಮಾಜದ ಮತ್ತು ಸಾಂಸಾರಿಕ ರೀತಿ-ನೀತಿಗಳನ್ನು ಗೋಚರ ಮತ್ತು ಅಗೋಚರವಾಗಿ ಪ್ರೇರೇಪಿಸಿದ ಗಂಡು ಕಲೆಯಾಗಿದೆ. ದೇಶದಲ್ಲಿ ಪ್ರಗತಿಯ ವೇಗ ಹೆಚ್ಚಾದಂತೆ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳು ನೆಲಕಚ್ಚಿದವು, ಮರೆಯಾದವು. ಆಧುನಿಕತೆಯ ವೈಭವೀಕರಣ ಮಣ್ಣಿನ ಸತ್ವದ ಕಲೆಗಳನ್ನು ಅಸಹನೀಯಗೊಳಿಸಿದವು.

ಈ ಕಾರಣಗಳಿಂದ ಕಳೆದ 50 ವರ್ಷಗಳಲ್ಲಿ ಯಕ್ಷಗಾನದ ಉಳಿವು-ಅಳಿವುಗಳ ಎಚ್ಚರಿಕೆಯ ಗಂಟೆ ಮೊಳಗಿತು. 1960 ರಿಂದ 1980 ರ ದಶಕಗಳಲ್ಲಿ ಯಕ್ಷಗಾನದ ಪ್ರಸಂಗದ ಕಥೆಗಳಲ್ಲಿ, ರಂಗಸ್ಥಳ ವಿನ್ಯಾಸದಲ್ಲಿ, ವಿದ್ಯುಚ್ಛಕ್ತಿಯ ಬಳಕೆಯಲ್ಲಿ, ಧ್ವನಿಗೆ ಮೈಕ್‌ಗಳ ಬಳಕೆಯಲ್ಲಿ, ವೇಷಭೂಷಣಗಳಿಗೆ ಕೃತಕ ವಸ್ತು ಮತ್ತು ಬಟ್ಟೆಗಳ ಬಳಕೆಯಲ್ಲಿ ಬದಲಾವಣೆ ಮಾಡಿ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಯತ್ನಗಳನ್ನು ಮೇಳದ ಯಜಮಾನರುಗಳು ಹಾಗೂ ರಂಗದ ಹಿನ್ನೆಲೆ ಮತ್ತು ರಂಗಸ್ಥಳದ ಕಲಾವಿದರು ಮಾಡಿದರು.

ಇದೀಗ ಇನ್ನಷ್ಟು, ಮತ್ತಷ್ಟು ಬದಲಾವಣೆಗಳು ಅನಿವಾರ್ಯವಾಗತೊಡಗಿದೆ. ನಗರಗಳು ಮತ್ತು ಪೇಟೆಗಳೊಂದಿಗೆ ಗ್ರಾಮೀಣ ಜನ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಸಿನೆಮಾ, ಟಿವಿ ಸೀರಿಯಲ್ ನೋಡುವ ಇಂದಿನ ಜನಾಂಗಕ್ಕೆ ರಾತ್ರಿ ಇಡೀ ಪ್ರಸಂಗದ ಕಲ್ಪನೆ ಮಾಡಿಕೊಂಡು ಪ್ರಸಂಗದ ಅದ್ಭುತ ದೃಶ್ಯಗಳನ್ನು ಮನತುಂಬಿಕೊಳ್ಳುವ ಮುಗ್ಧತೆ ಕಡಿಮೆಯಾಗಿದೆ. ರಾತ್ರಿ ಕೃಷಿಯ ರಕ್ಷಣೆ, ಮನೆಯ ರಕ್ಷಣೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಿರುತ್ತದೆ. ಯಕ್ಷಗಾನ ಪ್ರದರ್ಶನಕ್ಕೆ ಜಾಗದ ಕೊರತೆಯಾಗಿದೆ.

ಇದರೊಂದಿಗೆ ರಾತ್ರಿ ಇಡೀ ಮೈಕಾಸುರನ ಹಿಂಸೆ ಅನ್ನಿಸಿದರೂ, ಕಲೆಯ ಮೇಲಿನ ಗೌರವ ಮತ್ತು ಯಕ್ಷಗಾನ ಮೇಳಗಳ ಹಿಂದೆ ಇರುವ ಕ್ಷೇತ್ರಗಳ ಮತ್ತು ದೇವತಾ ಸಾನ್ನಿಧ್ಯದ ಮೇಲಿನ ಗೌರವದಿಂದ ಕಲಾಭಿಮಾನಿಗಳು ಸಹಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯ ವರೆಗೆ ಪ್ರಸಂಗಗಳನ್ನು ನೋಡಿ ಹೋಗುವವರು ಹೆಚ್ಚಾಗುತ್ತಿದ್ದಾರೆ. ಕೆಲವು ಮೇಳಗಳ ಪ್ರಸಂಗದ ನೀರವತೆಯೂ, ಕಲಾವಿದರ ಪರಿಶ್ರಮದ ಕೊರತೆಯ ಕಾರಣದಿಂದಲೂ ರಾತ್ರಿ ಇಡೀ ಪ್ರಸಂಗ ನೋಡುವ ಪ್ರೇಕ್ಷಕರ ಕೊರತೆಯಾಗುತ್ತಿದೆ.

ಈಗ ಇನ್ನೊಂದು ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕಾಗಿದೆ. ಈಗಾಗಲೇ ಕೆಲವು ಮೇಳಗಳು ಪ್ರಯೋಗ ನಡೆಸಿದ ಕಾಲಮಿತಿಯ ಪ್ರಸಂಗಗಳನ್ನು ಶ್ರದ್ಧೆ ಹಾಗೂ ಪರಿಣಾಮಕಾರಿಯಾಗಿ ಪ್ರದರ್ಶಿಸುವ ಬದಲಾವಣೆ ಬೇಕಾಗಿದೆ. ಕಾಲಮಿತಿ ಪ್ರದರ್ಶನ ಸಮಾಜದ ಎಲ್ಲ ವರ್ಗದವರನ್ನು, ಎಲ್ಲ ವಯಸ್ಸಿನವರನ್ನು ಮತ್ತು ಭಿನ್ನ ಮನಸ್ಕರನ್ನು ಆಕರ್ಷಿಸಲೆಂದು ಹಾರೈಸುತ್ತೇವೆ. ಬದಲಾವಣೆಗೆ ಮುಂದೆ ಸೂಕ್ತ ಸೂಚನೆ ಹಾಗೂ ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ಶ್ರೀಮಂಜುನಾಥ ಸ್ವಾಮಿ ಹಾಗೂ ಮೇಳದ ಶ್ರೀ ಗಣಪತಿ ದೇವರ ಅನುಗ್ರಹ ಇರಲೆಂದು ಹಾರೈಸುತ್ತೇವೆ. - ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ


*********************
ಕೃಪೆ : vijaykarnataka


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ